ಝೇಂಕಾರ ಪಕ್ಷಿಗಳು  -
	ಭೂಮಿಯ ಪಶ್ಚಿಮಾರ್ಧಗೋಳದಲ್ಲಿ ಮಾತ್ರ ಕಂಡು ಬರುವ ಒಂದು ತೆರನ ಹಕ್ಕಿಗಳು (ಹಮಿಂಗ್ ಬಡ್ರ್ಸ್). ದಕ್ಷಿಣ ಅಮೆರಿಕ, ಮೆಕ್ಸಿಕೊ, ಉತ್ತರ ಅಮೆರಿಕ, ವೆಸ್ಟ್ ಇಂಡೀಸ್‍ಗಳಲ್ಲಿ ಇವನ್ನು ನೋಡಬಹುದು. ಆ್ಯಪೋಡಿಫಾರ್ಮೀಸ್ ಗಣದ ಟ್ರೋಕಿಲಿಡೀ ಕುಟುಂಬಕ್ಕೆ ಸೇರಿವೆ. ಸುಮಾರು 320 ಬಗೆಯ ಝೇಂಕಾರ ಪಕ್ಷಿಗಳುಂಟು. ತಮ್ಮ ಮೈಬಣ್ಣದ ಉಜ್ಜ್ವಲತೆಗೆ ಹೆಸರಾಗಿರುವ ಇವು ಅತ್ಯಂತ ಪುಟ್ಟ ಗಾತ್ರದ ಹಕ್ಕಿಗಳೂ ಆಗಿವೆ. ಕಣ್ಣು ಕೋರೈಸುವ ಕಾಮನಬಿಲ್ಲಿನಂಥ ಇವುಗಳ ಬಣ್ಣವನ್ನು ಸರಿಗಟ್ಟುವ ಇತರ ಹಕ್ಕಿಗಳಿಂದರೆ ಸೂರಕ್ಕಿಗಳು (ಸನ್‍ಬಡ್ರ್ಸ್) ಮತ್ತು ಸಗ್ಗವಕ್ಕಿಗಳು (ಬಡ್ರ್ಸ್ ಆಫ್ ಪ್ಯಾರಡೈಸ್). ಕೆಲವು ತೆರನ ಝೇಂಕಾರ ಪಕ್ಷಿಗಳ ಗಂಡುಗಳ ತಲೆಯ ಮೇಲೆ ವಿಚಿತ್ರ ರೀತಿಯ ಶಿಖೆಗಳೂ ಕತ್ತಿನಲ್ಲಿ ಬಣ್ಣಬಣ್ಣದ ಪುಕ್ಕಗಳ ಗುಚ್ಛಗಳೂ ಬಾಲದಲ್ಲಿ ಉದ್ದನೆಯ ರೆಕ್ಕೆಗಳೂ ಇರುವುದುಂಟು. ಇವೆಲ್ಲ ಅಲಂಕಾರಗಳಿಂದಾಗಿ ಈ ಹಕ್ಕಿಗಳು ಪಕ್ಷಿ ಜಗತ್ತಿನ ರತ್ನಗಳೆನಿಸಿಕೊಂಡಿವೆ. ಇವುಗಳ ವರ್ಣವೈವಿಧ್ಯ ಎಷ್ಟಿದೆಯೆಂದರೆ ಹಿಂದೆ ಇವುಗಳ ಚರ್ಮದಿಂದ ಆಭರಣಗಳನ್ನು ತಯಾರಿಸುತ್ತಿದ್ದರು. 19ನೆಯ ಶತಮಾನದಲ್ಲಿ ವೆಸ್ಟ್ ಇಂಡೀಸ್, ಕೊಲಂಬಿಯ ಮುಂತಾದೆಡೆಗಳಿಂದ ಇವುಗಳ ಚರ್ಮ ಯೂರೋಪಿಗೆ ಲಕ್ಷಾಂತರ ಸಂಖ್ಯೆಯಲ್ಲಿ ರಫ್ತಾಗುತ್ತಿದ್ದವು. ಈ ವ್ಯಾಪಾರ ಈಗ ನಿಂತುಹೋಗಿದೆಯಾದರೂ ಝೇಂಕಾರ ಪಕ್ಷಿಗಳ ವೈಜ್ಞಾನಿಕ ಅಧ್ಯಯನ ಆರಂಭವಾದ್ದು ಈ ಚರ್ಮಗಳಿಂದಲೇ. ಬಹುಪಾಲು ಝೇಂಕಾರ ಪಕ್ಷಿಗಳನ್ನು ಜೀವಂತವಾಗಿ ಅವುಗಳ ಸ್ವಾಭಾವಿಕ ನೆಲೆಯಲ್ಲಿ ಅಭ್ಯಸಿಸಲಾಗಿದೆಯಾದರೂ ಕೆಲವು ಪ್ರಭೇದಗಳ ಪರಿಚಯ ಅವುಗಳ ಚರ್ಮದ ಮೂಲಕ ಮಾತ್ರ ಆಗಿದೆ. ಬಲು ಪುಟ್ಟ ಗಾತ್ರದ ಹಕ್ಕಿಗಳಿವು. ಉದಾಹರಣೆಗೆ ಕ್ಯೂಬದಲ್ಲಿ ಜೀವಿಸುವ ಜೇನು ಝೇಂಕಾರ ಪಕ್ಷಿ ಕೇವಲ 6.35 ಛಿm. ಉದ್ದ ಇದೆ. ಇದರ ತೂಕ 2 g. ಮಾತ್ರ. ಅತ್ಯಂತ ದೊಡ್ಡ ಗಾತ್ರದ ಝೇಂಕಾರ ಪಕ್ಷಿಯೆಂದರೆ ಎಕ್ವಡಾರ್, ಚಿಲಿಗಳಲ್ಲಿ ಕಾಣಸಿಗುವ ದೈತ್ಯ ಝೇಂಕಾರ ಪಕ್ಷಿ. ಇದರ ಉದ್ದ 21.50 ಛಿm ; ತೂಕ ಸುಮಾರು 20 g. ಝೇಂಕಾರ ಪಕ್ಷಿಗಳ ದೇಹ ವರ್ಣಮಯವೆಂದು ಮೇಲೆ ಹೇಳಿದೆ. ದೇಹದ ಬಣ್ಣ ಮುಖ್ಯವಾಗಿ ಕಪ್ಪು, ಕಂದು, ಇಲ್ಲವೆ ಹಸಿರು. ಕತ್ತು, ಹಣೆ, ನೆತ್ತಿ, ಪಾಶ್ರ್ವ, ಬೆನ್ನು ಮೊದಲಾದೆಡೆ ಮಿರುಗುವ ಹಸಿರು, ನೀಲಿ, ನೇರಳೆ, ಬಂಗಾರದ ಬಣ್ಣಗಳ ಗುರುತುಗಳುಂಟು. ಇವುಗಳ ಕೊಕ್ಕು ತೆಳುವಾಗಿಯೂ ಚೂಪಾಗಿಯೂ ಸಾಮನ್ಯವಾಗಿ ನೇರವಾಗಿಯೂ ಇದೆ. ಕಾಸ್ಟರೀಕ, ಎಕ್ವಡಾರ್‍ಗಳಲ್ಲಿ ವಾಸಿಸುವ ಕುಡುಗೊಕ್ಕು ಝೇಂಕಾರ ಪಕ್ಷಿಯ ಕೊಕ್ಕು ಮಾತ್ರ ಬಿಲ್ಲಿನಂತೆ ಬಾಗಿದೆ. ದಕ್ಷಿಣ ಅಮೆರಿಕದ ಕತ್ತಿಕೊಕ್ಕಿನ ಝೇಂಕಾರ ಪಕ್ಷಿಯಲ್ಲಿ ಅದರ ದೇಹದ ಉದ್ದಕ್ಕಿಂತ ಹೆಚ್ಚು ಉದ್ದದ ಕೊಕ್ಕು ಉಂಟು. ಈ ಹಕ್ಕಿಗಳ ಇನ್ನೊಂದು ವಿಚಿತ್ರ ಲಕ್ಷಣವೆಂದರೆ ನಾಲಗೆಯನ್ನು ಕೊಕ್ಕಿಗಿಂತ ಮುಂದಕ್ಕೆ ಚಾಚುವ ಸಾಮಥ್ರ್ಯ. ಕೆಲವು ಪ್ರಭೇದಗಳಲ್ಲಿ ನಾಲಗೆ ನಳಿಕೆಯಂತಿದೆ. ಇನ್ನು ಕೆಲವಲ್ಲಿ ನಾಲಗೆಯ ತುದಿ ಕುಂಚದಂತಿದೆ. ಹೂಗಳಿಂದ ಮಧುವನ್ನು ಹೀರುವುದಕ್ಕೆ, ಸಣ್ಣ ಪುಟ್ಟ ಕೀಟಗಳನ್ನು ಹಿಡಿಯುವುದಕ್ಕೆ ಇದರಿಂದ ಅನುಕೂಲ.

	ಝೇಂಕಾರ ಪಕ್ಷಿಗಳು ತಮ್ಮ ರೆಕ್ಕೆಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ಬಡಿಯಬಲ್ಲವು (ಸೆಕೆಂಡಿಗೆ 50-90 ಸಲ ಎಂದು ಹೇಳಲಾಗಿದೆ). ಇವು ಹಾರುವಾಗ ಉಂಟಾಗುವ ಝೇಂಕಾರ ಶಬ್ದಕ್ಕೆ ಇದೇ ಕಾರಣ. ರೆಕ್ಕೆ ಬಡಿತ ಎಷ್ಟು ರಭಸವೆಂದರೆ ಬರಿಗಣ್ಣಿಗೆ ಕಾಣುವುದು ಬರಿಯ ಒಂದು ಮುಸಕು ಛಾಯೆ ಮಾತ್ರ. ಇವು ಬಹು ವೇಗವಾಗಿ ಹಾರಲೂ ಬಲ್ಲವು; ಇವುಗಳ ವೇಗ ಗಂಟೆಗೆ 48 ಞm. ಝೇಂಕಾರ ಪಕ್ಷಿಗಳ ಅತ್ಯಂತ ಸೋಜಿಗದ ಲಕ್ಷಣವೆಂದರೆ ಹಠಾತ್ತನೆ ಹೆಲಿಕಾಪ್ಟರಿನಂತೆ ಸ್ಥಿರವಾಗಿ ಗಾಳಿಯಲ್ಲಿ ರೆಕ್ಕೆ ಬಡಿಯುತ್ತ ನಿಲ್ಲಬಲ್ಲ ಸಾಮಥ್ರ್ಯ, ಅಂತೆಯೇ ಮೇಲಕ್ಕೆ, ಕೆಳಕ್ಕೆ ಚಲಿಸಬಲ್ಲವಲ್ಲದೆ ಹಿಮ್ಮುಖವಾಗಿ ಹಾರುವ ಲಕ್ಷಣ ಇವುಗಳಲ್ಲಿ ಮಾತ್ರ ಕಂಡುಬರುವಂಥದು. ಈ ಹಕ್ಕಿಗಳಿಗೆ ಭರ್ಜರಿಯಾದ ರೆಕ್ಕೆ ಸ್ನಾಯುಗಳಿರುವುದೂ ಎದೆ ಮೂಳೆಯಲ್ಲಿ ಆಳವಾದ ಹಾಗೂ ದೃಢವಾದ ಅಡಿಗಟ್ಟು (ಕೀಲ್) ಇರುವುದೂ ರೆಕ್ಕೆಯ ಮೂಳೆಗಳು ಭುಜದ ದೂಲಕ್ಕೆ ವಿಚಿತ್ರರೀತಿಯ ತಿರುಪುಕೀಲಿನಿಂದ ಸೇರಿಕೊಂಡಿರುವುದೂ ಅವುಗಳ ಹಾರಾಟದ ನಿಪುಣತೆಗೆ ಕಾರಣ. ಇವುಗಳ ಕಾಲುಗಳು ತುಂಬ ಚಿಕ್ಕವು ಹಾಗೂ ದುರ್ಬಲವಾದವು. ಇದರಿಂದಾಗಿ ರೆಂಬೆಗಳ ಮೇಲೆ ಕೂತುಕೊಳ್ಳುವುದಕ್ಕೆ ಮಾತ್ರ ಇವು ಬಳಕೆಯಾಗುತ್ತವೆ. ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುವಾಗ, ದೂರ ಎಷ್ಟೇ ಕಡಿಮೆಯಿರಲಿ, ಇವು ಹಾರುತ್ತವೆಯೇ ವಿನಾ ಕಾಲಿನಿಂದ ನಡೆಯವು. ಝೇಂಕಾರ ಪಕ್ಷಿಗಳು ತಮ್ಮ ಗಾತ್ರದ ಅಲ್ಪತೆಯನ್ನೂ ಹಾರುವ ನಿಪುಣತೆಯನ್ನೂ ಸಮರ್ಥವಾಗಿ ಬಳಸಿಕೊಂಡು ಇನ್ಯಾವುದೇ ಹಕ್ಕಿಯ ಸ್ಪರ್ಧೆಯಿರದ ಜೈವಿಕಕ್ಷೇತ್ರವನ್ನು, ಅಂದರೆ ಹೂಗಳ ಪ್ರಪಂಚವನ್ನು, ಆಕ್ರಮಿಸಿವೆ. ತಮ್ಮ ಹಾರಾಟಕ್ಕೆ ಬೇಕಾಗುವ ಅಗಾಧ ಶಕ್ತಿಯನ್ನು ಹೂಗಳಲ್ಲಿನ ಮಧುವಿನಿಂದಲೂ ಪ್ರೋಟೀನುಗಳನ್ನು ಹೂಗಳಲ್ಲೇ ವಾಸಿಸುವ ಕೆಲವು ಕೀಟಗಳಿಂದಲೂ ಪಡೆಯುತ್ತವೆ. ಆಗೊಮ್ಮೆ ಈಗೊಮ್ಮೆ ಕೀಟಗಳಿಗಾಗಿಯೇ ಬೇಟೆಯಾಡುವುದೂ ಉಂಟು. ಅಪೂರ್ವವಾಗಿ ಗಿಡಮರಗಳ ಗಾಯಗಳಿಂದ ಒಸರುವ ರಸವನ್ನು ಕುಡಿಯುತ್ತವೆ. ಹೀಗೆ ತಮ್ಮ ಆಹಾರಕ್ಕಾಗಿ ಹೂವಿನಿಂದ ಹೂವಿಗೆ ಅಲೆಯುವ ಇವು ಪರೋಕ್ಷವಾಗಿ ಪರಾಗಸ್ಪರ್ಶ ಕ್ರಿಯೆಯನ್ನೂ ನಡೆಸುವುದರಿಂದ ಬಹಳ ಉಪಕಾರಿಗಳೆನಿಸಿವೆ.

	ಝೇಂಕಾರ ಪಕ್ಷಿಗಳ ಚಯಾಪಚಯ ಕ್ರಿಯೆಗಳ ದರ ಅತ್ಯಂತ ಹೆಚ್ಚು ಇದಕ್ಕಾಗಿ ಅತ್ಯಧಿಕ ಮೊತ್ತದ ಆಹಾರವನ್ನು ಇವು ಸೇವಿಸುತ್ತವೆ. ಇದರಲ್ಲಿ ಹೆಚ್ಚಿನ ಆಹಾರ ಇವುಗಳ ಚರ್ಮದ ಕೆಳಗೆ ಕೊಬ್ಬಿನ ಒಂದು ದಪ್ಪ ಪದರವಾಗಿ ಸಂಗ್ರಹಗೊಂಡಿರುತ್ತದೆ. ಕೆಲವು ಪ್ರಭೇದಗಳಲ್ಲಿ ಕೊಬ್ಬಿನ ಸಂಗ್ರಹ ಇರುವುದಿಲ್ಲ. ಇಂಥವು ಮೇಲಿಂದಮೇಲೆ ಮಧುವನ್ನು ಕುಡಿಯುತ್ತಿದ್ದು ಅದರಲ್ಲಿನ ಸಕ್ಕರೆಯಿಂದ ಶಕ್ತಿಯನ್ನು ಪಡೆಯುತ್ತವೆ. ಅಲ್ಲದೆ ಹಗಲಿನಲ್ಲಿ 40(-45(ಅ ಇರುವ ಇವುಗಳ ದೇಹದ ಉಷ್ಣತೆ ರಾತ್ರಿ ಕಾಲಗಳಲ್ಲಿ 18(ಅಗೆ ಇಳಿದುಬಿಡುತ್ತದೆಯೆಂದು ಗೊತ್ತಾಗಿದೆ. ಆಗ ಇವುಗಳ ಚಯಾಪಚಯ ಕ್ರಿಯೆಗಳ ವೇಗ ಕಡಿಮೆಯಾಗಿ ಶಕ್ತಿಯ ಉಳಿತಾಯ ಆಗುತ್ತದೆ. ಇದರಿಂದಾಗಿ ಇವು ರಾತ್ರಿವೇಳೇ ಒಂದು ರಿತಿಯ ಸುಪ್ತಾವಸ್ಥೆಯಲ್ಲಿದ್ದು ಶಕ್ತಿಯನ್ನು ಸಂಚಯಿಸಿಕೊಂಡು ಬೆಳಗ್ಗಿ ಬಿಸಿಲು ಬಿದ್ದ ಮೇಲೆ ಮತ್ತೆ ಚುರುಕಾಗುತ್ತವೆ. ಇವುಗಳ ಕೂಗು ಬಲು ಕ್ಷೀಣವಾದುದು. ದಕ್ಷಿಣ ಅಮೆರಿಕದ ಉತ್ತರ ಭಾಗಗಳಲ್ಲಿ ಕಾಣಸಿಗುವ ನೇರಳೆ ಕಿವಿಯ ಝೇಂಕಾರ ಪಕ್ಷಿಯನ್ನು ಬಿಟ್ಟರೆ ಉಳಿದ ಬಗೆಗಳ ಗಂಡುಗಳು ಬಹುಪತ್ನೀಕಗಳು. ಪ್ರತಿಯೊಂದು ಗಂಡು ಹಕ್ಕಿಯೂ ತನ್ನದೇ ಆದ ಅಧೀನ ಪ್ರಾಂತವೊಂದನ್ನು ಸ್ಥಾಪಿಸಿಕೊಂಡು ಅದರೊಳಗೆ ಬರುವ ಬೇರೆ ಗಂಡುಗಳನ್ನು ಓಡಿಸುತ್ತಿದ್ದು ಹೆಣ್ಣುಗಳನ್ನು ತನ್ನ ವಿಚಿತ್ರ ಭಂಗಿಯ ಹಾರಾಟಗಳಿಂದ ಆಕರ್ಷಿಸುತ್ತದೆ. ಒಂದು ಹೆಣ್ಣಿನೊಂದಿಗೆ ಕೂಡಿದ ಅನಂತರ ಗಂಡು ಇನ್ನೊಂದರ ಗಮನ ಸೆಳೆಯತೊಡಗುತ್ತದೆ. ಗರ್ಭ ಧರಿಸಿದ ಹೆಣ್ಣು ಮರಗಿಡಗಳ ರಂಬೆಗಳ ಮೇಲೆ ಗೂಡು ಕಟ್ಟಿ 2 ಮೊಟ್ಟಗಳನ್ನಿಡುವುದು. ಮೊಟ್ಟೆಗಳ ಬಣ್ಣ ಅಚ್ಚಬಿಳಿ. 14-19 ದಿವಸಗಳ ತರುವಾಯ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. ಸುಮಾರು 20 ದಿವಸಗಳ ಕಾಲ ತಾಯಿ ಪೋಷಣೆಯಲ್ಲಿ ಬೆಳೆದು ಅನಂತರ ಸ್ವತಂತ್ರ ಜೀವನವನ್ನು ಆರಂಭಿಸುತ್ತವೆ.
(ಎಸ್.ಪಿ.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ